ರೀಡಿಂಗ್, ರೂಫಸ್ ಡೇನಿಯಲ್ ಐಸಾಕ್ಸ್
1860-1935. ಭಾರತದ ವೈಸ್‍ರಾಯ್  (1921-26). ಹಣ್ಣಿನ ವ್ಯಾಪಾರಿಯ ಮಗನಾಗಿ ಹುಟ್ಟಿ(1860), ಲಂಡನ್, ಟ್ರೂಸೆಲ್ಸ್, ಹ್ಯಾನೋವರ್‍ನಲ್ಲಿ ವಿದ್ಯಾಭ್ಯಾಸ ಮಾಡಿದ. ಸಾಮಾನ್ಯನೊಬ್ಬ ಬ್ರಿಟಿಷ್ ಮಾಕ್ರ್ವಸ್ ಪದವಿಯನ್ನು ಪಡೆದವರಲ್ಲಿ ಇವನೇ ಮೊದಲಿಗ. ಇಂಗ್ಲೆಂಡಿನ ನ್ಯಾಯವಾದಿ, ರಾಜಕಾರಣಿ, ಮುಖ್ಯನ್ಯಾಯಾಧೀಶ ಮೊದಲಾದ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ. ಬ್ರಿಟಿಷ್ ಮಂತ್ರಿಮಂಡಲದಲ್ಲಿ ವಿದೇಶಾಂಗ ಮಂತ್ರಿಯಾಗಿದ್ದ (1913). ಇವನು ವೈಸರಾಯ್ ಆಗಿದ್ದ ಕಾಲದಲ್ಲಿ ಭಾರತದಲ್ಲಿ ಅನೇಕ ಘಟನೆಗಳು ಮಿಂಚಿನ ವೇಗದಲ್ಲಿ ನಡೆದವು. ಮಲಬಾರಿನ ಮಾಪಿಳ್ಳೆಗಳು ಖಿಲಾಪತ್ ಚಳವಳಿಯಿಂದ ಪ್ರೇರಿತರಾಗಿ ದಂಗೆಯೆದ್ದರು. ಅನೇಕ ಹಿಂದು ಮತ್ತು ಯುರೋಪಿಯನ್ನರು ಮಾಪಿಳ್ಳೆಗಳ ದೌರ್ಜನ್ಯ, ಹಿಂಸಾಕೃತ್ಯಗಳಿಗೆ ಒಳಗಾಗಬೇಕಾಯಿತು. ದಂಗೆಯನ್ನು ಹತ್ತಿಕ್ಕಿ ಹಲವರನ್ನು ಸೆರೆಹಿಡಿಯಲಾಯಿತು. ಸಾಗಿಸುವಾಗಿನ ಅಜಾಗರೂಕತೆಯಿಂದಾಗಿ ಸೆರೆಯಾದ ಹಲವರು ಉಸಿರುಕಟ್ಟಿ ಸತ್ತರು. ನಾಭ ಮತ್ತು ಇಂದೂರ್ ಆಶ್ರಿತ ಸಂಸ್ಥಾನಗಳ ಒಳಾಡಳಿತ ಹದಗೆಟ್ಟಿತು. ರಾಷ್ಟ್ರೀಯ ಸ್ವಾತಂತ್ರ್ಯ ಚಳವಳಿಯ ಇತಿಹಾಸದಲ್ಲಿ ವೈಸರಾಯಿಯಾಗಿದ್ದ ಈತನ ಕಾಲ ಮಹತ್ವದ್ದು. ಬ್ರಿಟಿಷರು ಭಾರತದಲ್ಲಿ ಹೊಸದಾಗಿ ಜಾರಿಗೆ ತಂದಿದ್ದ ಸಂವಿಧಾನದಿಂದ ಅತೃಪ್ತಿಗೊಂಡ ಕಾಂಗ್ರೆಸ್ ಪಕ್ಷ ಮಹಾತ್ಮಗಾಂಧೀಜಿಯವರ ನಾಯಕತ್ವದಲ್ಲಿ ಅಸಹಕಾರ ಚಳವಳಿಯನ್ನು ಪ್ರಾರಂಭಿಸಿತು. ರಾಷ್ಟ್ರೀಯ ಮನೋಭಾವ ದೇಶದಲ್ಲೆಲ್ಲಾ ವ್ಯಾಪಿಸಿತು. ಪ್ರಿನ್ಸ್ ಆಫ್ ವೇಲ್ಸ್‍ನ ಭಾರತ ಭೇಟಿಯನ್ನು ಉಗ್ರವಾಗಿ ಬಹಿಷ್ಕರಿಸಲಾಯಿತು. ಸರ್ದಾರ್ ಪಟೇಲ್, ಮೋತಿಲಾಲ್ ನೆಹರೂ ಹಾಗೂ ಚಿತ್ತರಂಜನದಾಸ್ ಮುಂತಾದ ಪ್ರಮುಖ ನೇತಾರರು ಕಾಂಗ್ರೆಸ್ ಪಕ್ಷ ಸೇರಿ ಗಾಂಧೀಜಿಗೆ ಬೆಂಬಲವಾಗಿ ನಿಂತರು. ಪರದೇಶಿ ವಸ್ತುಗಳಿಗೆ ಬಹಿಷ್ಕಾರ ಹಾಕಲಾಯಿತು. ಇದರಿಂದಾಗಿ ರೀಡಿಂಗನು ಬ್ರಿಟಿಷರ ಆಡಳಿತ ತತ್ತ್ವಗಳ ಬಗ್ಗೆ ಭಾರತೀಯರ ಒಲವನ್ನು ಗಳಿಸಲು ವಿಫಲನಾದ. ಮುಸ್ಲಿಂ ನಾಯಕರಾದ ಮಹಮ್ಮದ್ ಅಲಿ ಮತ್ತು ಷೌಕತ್ ಅಲಿಯವರನ್ನು ಸೆರೆವಾಸ ಮಾಡಿಸಿ, ಗಾಂಧೀಜಿಯವರೊಂದಿಗೆ ಸಂಧಾನ ನಡೆಸಲು ಹೋಗಿ ವಿಫಲನಾದ. ಅಸಹಕಾರ ಚಳವಳಿಯ ನಾಯಕತ್ವ ವಹಿಸಿದರೆಂದು ಗಾಂಧೀಜಿಯವರನ್ನು ಸೆರೆಮನೆಗೆ ಕಳುಹಿಸಿದ(1922). ಅಂದಿನ ಚಳವಳಿಯಲ್ಲಿ ಹಿಂಸಾತ್ಮಕ ಕೃತ್ಯಗಳು ನಡೆದು ನಾಗರಿಕರ ದ್ವೇಷಕ್ಕೆ ಪೊಲೀಸ್ ಪಡೆ ತುತ್ತಾಗಿ ಅನೇಕ ನಷ್ಟಗಳನ್ನು ಅನುಭವಿಸಿತು. ಕೇಂದ್ರ ಪ್ರತಿನಿಧಿ ಸಭೆಯಲ್ಲಿ ಬ್ರಿಟಿಷ್ ಧೋರಣೆಗಳಿಗೆ ವಿರೋಧ ವ್ಯಕ್ತವಾಯಿತು. ಈ ವೇಳೆಗಾಗಲೇ ಭಾರತದಲ್ಲಿ ಸ್ವರಾಜ್ಯಪಕ್ಷ ಬೇರೂರಿತು. ಆಡಳಿತ ಮತ್ತು ಸಂವಿಧಾನಗಳ ನ್ಯೂನತೆಗಳನ್ನು ವರದಿಮಾಡಲು ಬ್ರಿಟಿಷ್ ಸಕಾರ ಮುಡ್ಡೀಮನ್ ಸಮಿತಿಯನ್ನು ನೇಮಿಸಿತು(1925). ಈತ ವೈಸ್‍ರಾಯ್ ಪದವಿಯಿಂದ ನಿವೃತ್ತನಾಗಿ ಇಂಗ್ಲೆಂಡಿಗೆ ತೆರಳಿದ(1926). ಇವನ ಕಾಲದಲ್ಲಿ ಉಕ್ಕು ಮತ್ತು ಹತ್ತಿ ಬಟ್ಟೆ ಕೈಗಾರಿಕೆಗೆ ರಕ್ಷಣೆ ದೊರೆಯಿತು. ಢಾಕಾ, ದೆಹಲಿ ಮತ್ತು ನಾಗಪುರ ವಿಶ್ವವಿದ್ಯಾಲಯಗಳು ಸ್ಥಾಪಿತವಾದುವು(1925). 1925ರಲ್ಲಿ ಇಂಟರ್ ಯುನಿವರ್ಸಿಟಿ ಬೋರ್ಡು ಸ್ಥಾಪಿತವಾಯಿತು. 1935ರಲ್ಲಿ ಈತ ಲಂಡನ್ನಿನಲ್ಲಿ ನಿಧನನಾದ.    
(ಜಿ.ಆರ್.ಎಂ;ಆರ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ